ಶ್ರೀನಿವಾಸಮೂರ್ತಿ, ಎಂ ಆರ್
	1892-1953. ಆಧುನಿಕ ಕನ್ನಡ ವನ್ನು ಕಟ್ಟಿ ಬೆಳೆಸಿದ ಸಾಹಿತಿ, ವಿದ್ವಾಂಸರು. ಮೈಸೂರಿನಲ್ಲಿ 1892 ಆಗಸ್ಟ್ 28ರಂದು ಜನಿಸಿದರು.  ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನವನ್ನು ಓದಿ 1915ರಲ್ಲಿ ಬಿ.ಎ.ಪದವಿಯನ್ನು, ಅನಂತರ ಬಿ.ಟಿ. ಪದವಿಯನ್ನು ಗಳಿಸಿ ಶಿಕ್ಷಣ ಇಲಾಖೆಯನ್ನು ಪ್ರವೇಶಿಸಿದ ಇವರು ಹಲವು ಬಗೆಯ ಜವಾಬ್ದಾರಿ ಹುದ್ದೆಗಳನ್ನು ನಿರ್ವಹಿಸಿದರು.  ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್ಸ್‍ಪೆಕ್ಟರಾಗಿ ಸೇವೆಸಲ್ಲಿಸಿದ ಇವರು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟುವಿನ ಸಹಸಂಪಾದಕರಾಗಿ ಮತ್ತು ಪ್ರಧಾನ ಸಂಪಾದಕರಾಗಿಯೂ (1943-46) ಕೆಲಸ ಮಾಡಿದರು. ಜಿಲ್ಲಾ ವಿದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಇವರು 1947ರಲ್ಲಿ ಸರ್ಕಾರಿ ಹುದ್ದೆಯಿಂದ ನಿವೃತ್ತರಾದರು. ಉತ್ಕøಷ್ಟ ಅಧ್ಯಾಪಕ, ಸಮರ್ಥ ಅಧಿಕಾರಿ ಎಂದು ಹೆಸರುಗಳಿಸಿದ್ದ ಇವರು ಒಳ್ಳೆಯ ವಾಗ್ಮಿಯೆಂಬ ಕೀರ್ತಿಗೂ ಭಾಜನರಾಗಿದ್ದರು.

	ಸಂಸ್ಕøತದ ಜೊತೆಗೆ ಹಳಗನ್ನಡ ಮತ್ತು ಹೊಸಗನ್ನಡ ಸಾಹಿತ್ಯವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದ ಇವರು ಸೃಷ್ಟಿಸಿರುವ ಸಾಹಿತ್ಯ ವೈವಿಧ್ಯಮಯವಾದದ್ದು. ಸ್ಕೌಟು ಬಾಲಕರ ಅಭಿನಯಕ್ಕೆಂದು ಇವರು ರಚಿಸಿದ ಕಂಠೀರವ ವಿಜಯ ಎಂಬುದು ಒಂದು ಕಿರುನಾಟಕ. ಧರ್ಮ ದುರಂತ, ನಾಗರಿಕ ಇವು ಇವರ ಇತರ ನಾಟಕಗಳು. ಸಾವಿತ್ರಿ, ಮಹಾತ್ಯಾಗ (ಇದು ಚಲನಚಿತ್ರವೂ ಆಗಿದೆ) ಮತ್ತು ರಂಗಣ್ಣನ ಕನಸಿನ ದಿನಗಳು-ಇವು ಇವರು ರಚಿಸಿರುವ ಮೂರು ಕಾದಂಬರಿಗಳು.  ರಂಗಣ್ಣನ ಕನಸಿನ ದಿನಗಳು ಆಧುನಿಕ ಕನ್ನಡ ಕಥಾಸಾಹಿತ್ಯದ ಬಹುಮುಖ್ಯ ಕೃತಿಗಳಲ್ಲೊಂದು.  ಗ್ರಾಮೀಣ ಬದುಕಿನ ಶಾಲಾಮಾಸ್ತರುಗಳ ಜೀವನ ವಿವರಗಳು ಈ ಕೃತಿಯಲ್ಲಿ ಜೀವಂತವಾಗಿ ನಿರೂಪಣೆಗೊಂಡಿವೆ.  ಅಯಸ್ಕಾಂತತೆ ಮತ್ತು ವಿದ್ಯುಚ್ಛಕ್ತಿ, ಉಪಾಧ್ಯಾಯರ ಆರೋಗ್ಯಶಾಸ್ತ್ರ, ಸ್ಕೌಟುಗಳ ಕನ್ನಡ ಕೈಪಿಡಿ ಈ ಕೃತಿಗಳು ವಿವಿಧ ಕ್ಷೇತ್ರಗಳಲ್ಲಿ ಇವರಿಗಿದ್ದ ಪರಿಶ್ರಮಕ್ಕೆ ಸಾಕ್ಷಿಯಾಗಿವೆ. ಮೈಸೂರು ವಿಶ್ವವಿದ್ಯಾನಿಲಯಕ್ಕಾಗಿ ಪ್ರಭುಲಿಂಗಲೀಲೆಯ ಸಂಗ್ರಹವನ್ನು ಸಂಪಾದಿಸಿಕೊಟ್ಟಿದ್ದಾರೆ.  ವಚನಧರ್ಮಸಾರ ಎಂಬ ವಚನ ವಿಮರ್ಶೆಯ ಪುಸ್ತಕವನ್ನು ಬರೆದಿದ್ದಾರೆ.  ಭಕ್ತಿಭಂಡಾರಿ ಬಸವಣ್ಣನವರು ಎಂಬುದು ಇವರು ರಚಿಸಿರುವ ಒಂದು ಸಂಶೋಧನ ಗ್ರಂಥ.

	ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಹಿರಿಯರಲ್ಲಿ ಒಬ್ಬರಾದ ಶ್ರೀನಿವಾಸಮೂರ್ತಿಯವರು ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅಧ್ಯಕ್ಷರಾಗಿ (1950-53) ಸೇವೆ ಸಲ್ಲಿಸಿದರಲ್ಲದೆ, ಕನ್ನಡ ನುಡಿ ಮತ್ತು ಪರಿಷತ್ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು.

	ಇವರು ಸಲ್ಲಿಸಿದ ವಿವಿಧ ಬಗೆಯ ನಾಡುನುಡಿಗಳ ಸೇವೆಗೆ ಮನ್ನಣೆ ಎಂಬಂತೆ 1940ರಲ್ಲಿ ಬಾದಾಮಿಯ ಶಿವಯೋಗಮಂದಿರ ಇವರಿಗೆ ವಚನವಾಙ್ಮಯವಿಶಾರದ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿತು. 1950ರಲ್ಲಿ ಸೊಲ್ಲಾಪು ರದಲ್ಲಿ ನಡೆದ 33ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ಜನತೆ ಗೌರವಿಸಿತು.  ಇವರು ಬರೆದಿದ್ದ ಇಪ್ಪತ್ತನಾಲ್ಕು ಸಂಶೋಧನ ಲೇಖನಗಳನ್ನು, ವಿಮರ್ಶೆ, ಮುನ್ನುಡಿ ಬರೆಹಗಳನ್ನು ಮತ್ತು ಕೆಲವು ಅಪ್ರಕಟಿತ ಲೇಖನಗಳನ್ನು ಸಂಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಾಹಿತ್ಯಾಲೋಕ (1978) ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಇವರು 1953 ಸೆಪ್ಟೆಂಬರ್ 16 ರಂದು ನಿಧನರಾದರು.	
						
	(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ